ಕಾಲೆ ಕೋಲ ಇದೊಂದು ತುಲುನಾಡಿನ ವಿಶಿಷ್ಟಸಾಂಪ್ರದಾಯಿಕ ಆಚರಣೆ ಆಗಿರುತ್ತದೆ. ಇದು ಬಲು ಪ್ರಾಚೀನ ಆಚರಣೆ. ನಾಗಕೋಲ,ಬೂತ ಕೋಲಗಳಿಂತಲೂ ಪ್ರಾಚೀನ. ನಾಗ ಕಲ್ಲು ಮತ್ತು ಬೂತ ಕಲ್ಲುಗಳನ್ನು ಹಾಕಿ ನಂಬಿ ಕೊಂಡು ಬರುವ ಹಿಂದೆಯೇ ತುಲುನಾಡಲ್ಲಿ ಅಜ್ಜ ಅಜ್ಜಿ ಕಲ್ಲು ಹಾಕಿ ಹಿರಿಯರನ್ನು ನೆನಪಿಸಿ ಆರಾಧಿಸಿ ಕೊಂಡು ಬರುತ್ತಿದ್ದರು.

ಉಳ್ಳವರು ಎಂದರೆ ಶ್ರೀಮಂತರ ಹಿರಿಯರು ಮರಣ ಹೊಂದಿದರೆ ಸೂತಕದ ಕೊನೆ ದಿನ ಈ ಕಾಲೆ ಕೋಲವನ್ನು ಏರ್ಪಡಿಸುತ್ತಿದ್ದರು. ಕಾಲೆ ಎಂದರೆ ಕಪ್ಪು ಎಂದರ್ಥ. ಕೋಲ ಎಂದರೆ ವೇಷ ಎಂದರ್ಥ. ತುಲು ಭಾಷೆಯಲ್ಲಿ ಕಾಲೆ – ಬೊಲ್ಲೆ ಎಂಬ ಪದ ಇದೆ. ಅಂದರೆ ಕಪ್ಪು-ಬಿಳುಪು ಎಂಬ ಅರ್ಥ.

 

ಮರಣ ಅಥವಾ ಸಾವು ಆದ ಮನೆಯನ್ನು ತುಲುವಿನಲ್ಲಿ ಸಾವುದ ಇಲ್ಲ್ ಎನ್ನುವರು. ಹನ್ನೆರಡು ದಿನಈ ಮನೆಯಲ್ಲಿ ಸೂತಕದ ಛಾಯೆ ತುಂಬಿರುತ್ತದೆ.ಮನೆಮಂದಿ ದುಖಃ ದುಗುಡದಿಂದ ಇರುತ್ತಾರೆ. ಬರೇ ಗಂಜಿನೀರು ಸೇವಿಸುತ್ತಾ ದುಮ್ಮಾನದಲ್ಲಿ ದಿನ ಕಳೆಯುತ್ತಾರೆ. ಸಾವು ಮನೆಗೆ ಇತರರು ಪ್ರವೇಶಿಸುವುದ್ದಿಲ್ಲ. ಸಾವಿನಮನೆಯಲ್ಲಿ 13 ನೇ ದಿನದಲ್ಲಿ ಅರಿ ಬಿರ್ಕುನ(ಅಕ್ಕಿ-ಅಕ್ಷತೆ ಹಾಕುವುದು)ಕಾರ್ಯಕ್ರಮ ಇರುತ್ತದೆ.ಹನ್ನೆರಡುದಿನದವರೆಗೆ ವಿವಿಧ ವಿಧಿ ವಿಧಾನಗಳು ಇರುತ್ತದೆ.

ಅಂದಿನ ಕಾಲದಲ್ಲಿ ಆತ್ಮ, ಪ್ರೇತ ,ವೈಕುಂಠ,ಸ್ವರ್ಗ ನರಕ,ದೋಷ, ಮುಕ್ತಿ, ಮೋಕ್ಷ ಪ್ರಾಯಶ್ಚಿತ್ತ,ಎಂಬಯಾವುದೇ ವಿಷಯಗಳು ಗೊತ್ತಿರಲಿಲ್ಲ.ಅರಿ ಬಿರ್ಕುನ(ಅಕ್ಕಿ-ಅಕ್ಷತೆ ಹಾಕುವುದು)ಕಾರ್ಯಕ್ರಮಕ್ಕೆ ಶೃಂಗಾರವನ್ನು ಮಡಿವಾಳರು ಮಾಡುತ್ತಾರೆ.ದೂಪೆ(ಗೋರಿ)ಗೆಅಕ್ಷತೆ ಹಾಕಿದ ಮೇಲೆ ಭಂಡಾರಿಯು ಮನೆಮಂದಿಗೆನೀರು ಪ್ರೋಕ್ಷಣೆ ಮಾಡಿದ ಬಳಿಕ ಸೂತಕದ ಮನೆ ಶುದ್ಧೀಕರಣ ಆಗುತ್ತದೆ. ಇಲ್ಲಿಗೆ ಉತ್ತರ ಕ್ರಿಯೆ (ಬೊಜ್ಜ) ಯ ಕಾರ್ಯಕ್ರಮ ಮುಗಿಯುತ್ತದೆ. ಇದು ಸರಳ ರೀತಿಯ ಬೊಜ್ಜದ ಆಚರಣೆ ಆಗಿರುತ್ತದೆ.ಅರಿ ಬಿರ್ಕುನಕಾರ್ಯಕ್ರಮ ಮುಗಿಯಿತೆಂದರೆ ಸಾವಧಾನವಾಗಿ ಸಾವಿನ ಮನೆ ಯಥಾಸ್ತಿತಿಗೆ ಬರುತ್ತದೆ‌.

ಮೇಲೆ ಹೇಳಿದಂತೆ ಉಳ್ಳವರ ಹಿರಿಯರು ಮರಣಹೊಂದಿದರೆ ಕಾಲೆ ಕೋಲ ಇರುತ್ತದೆ. ಪೂಕರೆ ಹಾಕುತ್ತಾರೆ. ದೋಲು ತಮ್ಮಟೆ ಇರುತ್ತದೆ. ಇದೊಂದು ವಿಶೇಷವಾದ ಗೌಜಿ ವಿಜೃಂಭಣೆಯ ಉತ್ತರ ಕ್ರಿಯೆ ಅಥವಾ ಬೊಜ್ಜ ಆಗಿತ್ತು.

ಕಾಲೆ ಕೋಲ:

ಹನ್ನೆರಡು ದಿನ ದುಖಃ ಸೂಚಕದ ಸೂತಕದ ಮನೆಯನ್ನು ಯಥಾಸ್ಥಿತಿಗೆ ತರಲು ಕಾಲೆ ಕೋಲವನ್ನು ಏರ್ಪಡಿಸುವುದು. ಇದೊಂದು ಮನೋರಂಜನೆ ಹೊರತು ಬೇರೆಯಾವುದೇ ವಿಧಿ ವಿಧಾನಗಳಲ್ಲ.. ಶರೀರ ಪೂರ್ತಿಕಪ್ಪು ಬಣ್ಣವನ್ನು(ಕಾಲೆ ಬಣ್ಣ) ಬಳಿದುಕೊಂಡು ಅಶ್ಲೀಲವಾಗಿ ನಲಿಯುವುದು.ಮಾತಾಡುತ್ತಾ ನಟಿಸುವುದು.ಸೊಂಟಕ್ಕೆ ಒಂದು ತುಂಡು ಕಪ್ಪು ಬಟ್ಟೆಯನ್ನು ಸುತ್ತಿ
ಕೊಂಡು ಇರುವುದು. ಹಿರಿಯರು ಹೇಳುವಂತೆ ಸಿಲಂಟಿಬಾಳೆ ಕಾಯಿಯನ್ನು ಸೊಂಟಕ್ಕೆ ಕಟ್ಟಿ ಕೊಂಡು ಅಶ್ಲೀಲಮಾತುಗಳನ್ನು ಆಡುತ್ತಾ ನಟಿಸುವುದು. ಆತನ ನಟನೆಗೆ ಮನೋರಂಜನೆಗೆ ಮನೆಮಂದಿ ಎಲ್ಲಾ ದುಖಿಃತ ಹಾವಭಾವದಿಂದ ಹೊರಬಂದು ಹರ್ಷಿತರಾಗುವರು.

ಕಪ್ಪು ಬಣ್ಣದ ವೇಷವೇ ಕಾಲೆ ಕೋಲ ಹೊರತುಇದಕ್ಕೆ ಬೇರೆ ಯಾವುದೇ ವರ್ಣನೆ ಬೇಕಿಲ್ಲ. ಬಲುಪ್ರಾಚೀನ ಕಾಲದ ಆಚರಣೆ ಇದಾಗಿದೆ. ಆ ಕಾಲದಲ್ಲಿವಿವಿಧ ಬಣ್ಣಗಳು ಇರಲಿಲ್ಲ. ಈಗಿನ ಶ್ರೀಮಂತಿಕೆ ಇರಲಿಲ್ಲ.ಮೈಗೆ ಮಸಿ ಬಳಿದು ಕಾಲೆ ಕೋಲ ನಡೆಯುತ್ತಿತ್ತು.ದೋಲು ತಮ್ಮಟೆ ಬಡಿತಕ್ಕೆ ಕಾಲೆ ಕೋಲ ಇನ್ನಷ್ಟುರಂಜಿಸುತ್ತದೆ. ಕಾಲೆ ವೇಷದಾರರು ನಲಿಯುವರು.ಕಾಲ ಬದಲಾದಂತೆ ನಾಗರಾಧನೆ, ಬೂತರಾಧನೆಗಳಆರಾಧನೆ ಬದಲಾದಂತೆ ಕಾಲೆ ಕೋಲದಲ್ಲೂ ಬದಲಾವಣೆ ಕಂಡು ಬಂದಿದೆ.ಸ್ವರ್ಗ ನರಕ,ಆತ್ಮ ಪ್ರೇತ,ವೈಕುಂಠ, ಮೋಕ್ಷ,ಮುಕ್ತಿ ಎಂಬ ನಂಬಿಕೆಗಳು ಜನಿಸಿವೆ.ವೇಷದಲ್ಲಿ ಬದಲಾವಣೆ ಕಂಡು ಬಂದಿದೆ. ಹೆಚ್ಚುವರಿವೇಷಗಳು ಹುಟ್ಟಿವೆ.

ಪೂಕರೆ:
ಪೂ-ಕಲೆ ಪದವೇ ಪೂಕರೆ ಆಗಿದೆ.ಅಡಿಕೆ ಮರದಸಲಾಕೆಗಳಿಂದ ಕಂಭಗಳ ರಚನೆಯಂತೆ ಮಾಡುವರು.ಅವುಗಳಲ್ಲಿ ಗೂಡುಗಳನ್ನು ರಚಿಸಿ ಕಲಾತ್ಮಕವಾಗಿ ಬಣ್ಣ ಬಣ್ಣದ ಬಟ್ಟೆಗಳನ್ನು ಸುತ್ತುವುದು. ಅವುಗಳನ್ನುಹೂವುಗಳಿಂದ ಶೃಂಗಾರದಿಂದ ಅಲಂಕರಿಸುವುದು. ಹೂ-ಕಲೆ ಯೇ ಪೂ-ಕಲೆ(ಪೂಕರೆ) ಆಗಿದೆ. ಈ ರಚಿಸಿದ ಪೂಕಲೆಯನ್ನು ಮರಣ ಹೊಂದಿದವರ ಗೋರಿ/ದೂಪೆಯ ಸುತ್ತ ಇಡುವರು.ಅರಿ ಬಿರ್ಕುನವಿಧಿ ವಿಧಾನ ನಡೆಯುತ್ತದೆ. ಇದು ಮುಗಿದರೆ ಬೊಜ್ಜದಕಾರ್ಯಕ್ರಮ ಮುಗಿದಂತೆ. ನಂತರದ ಎಲ್ಲಾ ಕಾರ್ಯಕ್ರಮಗಳು ಮರಣಹೊಂದಿದವರಿಗೆ ಸಂಬಂಧ ಪಟ್ಟಿರುವುದಲ್ಲ. ಮದುವೆಗಳಲ್ಲಿ ದೇಸೆ(ಅಕ್ಷತೆ)ಹಾಕಿದ ಮೇಲೆಮದುವೆ ಮುಗಿದಂತೆ. ನಂತರದ ಕ್ರಮಗಳು ಮದುವೆಗೆಸಂಬಂಧ ಪಟ್ಟಿರುವುದಿಲ್ಲ. ಅದರಂತೆ ಇಲ್ಲಿ ಕೂಡಾ.

ಕಕ್ಕೆಗ್ ನುಪ್ಪು ದೀಪುನು(ಕಾಗೆಗೆ ಅನ್ನ ಇಡುವುದು):

ಮರಣೋತ್ತರದ ಎಲ್ಲಾ ಹದಿಮೂರು ದಿನಗಳ ಕ್ರಮಗಳು ವಿಧಿವತ್ತಾಗಿ ಯಶಸ್ವಿಯಾಗಿ ನಡೆದಿದೆಯೇಎಂದು ನೋಡುವುದರ ವಿಧಾನವೇ ಇದಾಗಿದೆ. ಕಾಗೆಗಳು ಬಂದು ಬೊಜ್ಜದ ಊಟವನ್ನು ಸ್ವೀಕಾರಮಾಡಿದರೆ ಮಡಿದವರು ತೃಪ್ತಿ ಪಟ್ಟಿದ್ದಾರೆ ಎಂಬ ನಂಬಿಕೆ. ಮುಟ್ಟದೆ ಇದ್ದರೆ ಏನೋ ನಮ್ಮಿಂದ ತಪ್ಪಾಗಿದೆ ಎಂಬನಂಬಿಕೆ. ಮಡಿದವರು ಬಂದು ಊಟ ಸ್ವೀಕಾರ ಮಾಡುತ್ತಾರೆಂಬುದಲ್ಲ. ಅರಿ ಬಿರ್ಕಿದ ಮೇಲೆ ಮಡಿದವರ ಈ ಮಣ್ಣಿನ ಋಣ ಮುಗಿಯುತ್ತದೆ.

ಬೊಜ್ಜ:

ಮರಣದ ಸೂತಕದ ಮನೆಯಲ್ಲಿ ಹನ್ನೆರಡು ದಿನ ಬರೇಗಂಜಿ ನೀರಲ್ಲೇ ಇರುತ್ತಾರೆ. ಅದರ ಸಲುವಾಗಿ ಹದಿಮೂರನೇ ದಿನ ಭೋಜನ ಮಾಡುತ್ತಾರೆ. ಭೋಜನಪದದಿಂದಲೇ ಬೊಜ್ಜ ಪದವು ಹುಟ್ಟಿರಬಹುದು.ಅವು ಎಂಚಿನ ನಿನ್ನ ಬೊಜ್ಜನ? ಅವು ಎಂಚಿನ ವನಸ?ಎಂಬ ಪ್ರಶ್ನಾರ್ಥಕ ಮಾತುಗಳು ತುಲು ಭಾಷೆಯಲ್ಲಿದೆ. ವನಸ್ ಎಂದರೆ ಊಟ ಎಂದರ್ಥ.

ಉಲಾಯಿ ಲೆಪ್ಪುನು(ಒಳಗೆ ಕರೆಯುವುದು)

ಉಲಾಯಿ ಲೆಪ್ಪುನು ಮರಣ ಹೊಂದಿದವರನ್ನಲ್ಲ.ಅರಿ ಬಿರ್ಕುನು ಕಾರ್ಯಕ್ರಮ ಮುಗಿದ ಬಳಿಕ ಮಡಿದವರನ್ನು ಇನ್ನೊಮ್ಮೆ ಕರೆಯಲು ಇರುವುದಿಲ್ಲ. ಅದುಮುಗಿದ ಕತೆ.ಸಾವಿನ ಮನೆಗೆ ಹನ್ನೆರಡು ದಿನ ಯಾರೂಬಂದಿರುವುದಿಲ್ಲ. ಇದರ ಸಲುವಾಗಿ ಅವರನ್ನು ಆಹ್ವಾನ ಮಾಡುವ ಕಾರ್ಯಕ್ರಮವೇ ಉಲಾಯಿ ಲೆಪ್ಪುನು ಈ ಕಾರ್ಯಕ್ರಮಕ್ಕೆ ತಯಾರಿಸಿದ ಭೋಜನವನ್ನುಎಡೆ ಇಟ್ಟು ನಂತರ ಅತಿಥಿ, ಕುಟುಂಬದ ನೆಂಟರಿಷ್ಟರುಸೇರಿ ಭೋಜನ ಮಾಡುವುದು. ಈ ಕಾರ್ಯಕ್ರಮದಲ್ಲಿಸ್ಪೆಷಲ್ ಎಂದರೆ ಕೋರಿ ಪುಂಡಿ(ಮುಷ್ಟಿ ಕಡುಬು ಮತ್ತು ಕೋಳಿ ಸಾರು).ಪುಂಡಿ ತಯಾರಿಸಲು ಮತ್ತುಬಡಿಸಲು ಸುಲಭವಾಗಿತ್ತು. ಅದನ್ನೇ ಮುಂದುವರಿಸಿಕೊಂಡು ಬಂದಿದ್ದಾರೆ.

ಸತ್ತವರ ಪಿಂಡ ಬಿಡುವುದು, ಮೂಳೆ ವಿಸರ್ಜನೆ, ವೈಕುಂಠ ಸಮರ್ಧನೆ,ಸತ್ತವರಿಗೆ ಮದುವೆ ಮಾಡುವುದು, ಮರಣದ ಬಳಿಕ ಜ್ಯೋತಿಷ್ಯ ಕೇಳುವುದು ಇದೆಲ್ಲಾಆದಿ ಮೂಲದಲ್ಲಿ ಇರಲಿಲ್ಲ. ನಂತರದ ಕಾಲದ ಬೆಳವಣಿಗೆ.ಮಡಿದವರನ್ನು ಕುಟುಂಬದ ಮರಣ ಹೊಂದಿದವರ ಪಟ್ಟಿಗೆ ಸೇರಿಸುವ ಸಂಪ್ರದಾಯ ಇತ್ತು. ಅವರೆನ್ನೆಲ್ಲಾನೆನಪಿಸಲು ಎಡೆ ಇಡುವ /ಹಾಕುವ ಸಂಪ್ರದಾಯ ಈಗಲೂ ಇದೆ.

— ಇಗೋ ಭಂಡಾರಿ
ನಿವೃತ್ತ ಬ್ಯಾಂಕ್ ಮೇನೆಜರ್
ದೇವರ್ದಯ,ಕಾರ್ಕಳ

Leave a Reply

Your email address will not be published. Required fields are marked *