ಕರ್ನಾಟಕ ಸರ್ಕಾರದ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯಿಂದ ಮಂಗಳೂರು ಜಿಲ್ಲಾ ಕಾರಾಗೃಹದ ಸಂದರ್ಶಕರ ಮಂಡಳಿಗೆ ಅಧಿಕಾರೇತರ ಸದಸ್ಯರಾಗಿ ಭಂಡಾರಿ ಸಮಾಜದ ಶಿಶಿರ್ ಭಂಡಾರಿಯವರನ್ನು ನಾಮನಿರ್ದೇಶನ ಮಾಡಲಾಗಿದೆ.

ಶಿಶಿರ್ ಭಂಡಾರಿಯವರು ಮಂಗಳೂರು ಪಡೀಲ್‌ನ ಶ್ರೀಮತಿ ಮೋಹಿನಿ ಭಂಡಾರಿ ಹಾಗೂ ಜನಾರ್ಧನ ಭಂಡಾರಿಯವರ ಪುತ್ರರಾಗಿದ್ದು, ಮಂಗಳೂರಿನ ಯುವ ನ್ಯಾಯವಾದಿಯಾಗಿದ್ದಾರೆ. ಅವರು ಕಾನೂನು ಕ್ಷೇತ್ರದಲ್ಲಿ ಉತ್ತಮ ಜ್ಞಾನ ಹಾಗೂ ಅನುಭವ ಹೊಂದಿದ್ದಾರೆ. ಸಮಾಜಸೇವೆಯ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಅವರು, ಕಾರಾಗೃಹದಲ್ಲಿರುವ ಬಂಧಿತರ ಕಲ್ಯಾಣ ಮತ್ತು ಸುಧಾರಣಾ ಕಾರ್ಯಗಳಿಗೆ ತಮ್ಮ ಅಮೂಲ್ಯ ಕೊಡುಗೆ ನೀಡುವ ನಿರೀಕ್ಷೆಯಿದೆ.

ಸಂದರ್ಶಕರ ಮಂಡಳಿಯ ಅಧಿಕಾರೇತರ ಸದಸ್ಯರಾಗಿ ಅವರು ಕಾರಾಗೃಹದ ವ್ಯವಸ್ಥೆ, ಬಂಧಿತರ ಸೌಲಭ್ಯಗಳು ಹಾಗೂ ಸುಧಾರಣಾ ಕ್ರಮಗಳ ಕುರಿತು ಸರ್ಕಾರಕ್ಕೆ ಅಗತ್ಯ ಸಲಹೆಗಳನ್ನು ನೀಡಲಿದ್ದಾರೆ. ಇವರ ನಾಮನಿರ್ದೇಶನವು ಆಡಳಿತ ಮತ್ತು ಸಮಾಜದ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವಲ್ಲಿ ಸಹಕಾರಿಯಾಗಲಿದೆ.
ಈ ಸಂದರ್ಭದಲ್ಲಿ ಶಿಶಿರ್ ಭಂಡಾರಿಯವರಿಗೆ ಭಂಡಾರಿ ವಾರ್ತೆಯು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿ ಶುಭಾಶಯಗಳನ್ನು ಕೋರುತ್ತಿದೆ.
-ಭಂಡಾರಿ ವಾರ್ತೆ