March 15, 2026
Feauture image

 

ಶಿಕ್ಷಣ ಹಾಗೂ ಸಂಶೋಧನೆ ಸಮಾಜದ ಪ್ರಗತಿಯ ಪ್ರಮುಖ ಆಧಾರಗಳಾಗಿವೆ. ಈ ಕ್ಷೇತ್ರಗಳಲ್ಲಿ ಸಾಧನೆ ಮಾಡುವವರು ತಮ್ಮ ಕುಟುಂಬಕ್ಕೂ, ಸಮಾಜಕ್ಕೂ ಹೆಮ್ಮೆಯನ್ನು ತರುತ್ತಾರೆ. ಒಂದೇ ಕುಟುಂಬದಲ್ಲಿ ದಂಪತಿಗಳಿಬ್ಬರೂ ಡಾಕ್ಟರೇಟ್ (ಪಿಎಚ್‌ಡಿ) ಪದವಿ ಪಡೆಯುವುದು ಅತ್ಯಂತ ವಿರಳವಾದ ಸಾಧನೆ. ಭಂಡಾರಿ ಸಮಾಜದ ಮಟ್ಟದಲ್ಲಿ ಇಂತಹ ಸಾಧನೆ ಬಹಳ ಅಪರೂಪವೆಂದೇ ಹೇಳಬಹುದು.

ಮಣಿಪಾಲದ ದಿ. ಹಿರಿಯಣ್ಣ ಭಂಡಾರಿ ಹಾಗೂ ಶ್ರೀಮತಿ ಸುಲೋಚನಾ ಭಂಡಾರಿ ದಂಪತಿಯ ಪುತ್ರರಾದ ಪ್ರೊ. ಡಾ. ನವೀನ್ ಚಂದ್ರ ಭಂಡಾರಿ ಮತ್ತು ಅವರ ಪತ್ನಿ ಡಾ. ರೇಖಾ ಎನ್. ಚಂದ್ರ ಅವರು ತಮ್ಮ ಪರಿಶ್ರಮ ಹಾಗೂ ಶೈಕ್ಷಣಿಕ ಆಸಕ್ತಿಯಿಂದ ಉನ್ನತ ಸಾಧನೆ ಮಾಡಿದ್ದಾರೆ.

ಸೋದೆ ಸಮೂಹ ಶಿಕ್ಷಣ ಸಂಸ್ಥೆಯ ನಿರಾಮಯ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್, ಬಂಟಕಲ್ ಇದರ ಉಪಪ್ರಾಂಶುಪಾಲ ಹಾಗೂ ಉದ್ಯಾವರದ ಎಸ್.ಡಿ.ಎಂ. ಆಯುರ್ವೇದ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಹಿರಿಯ ಸಂಶೋಧನಾ ಅಧಿಕಾರಿ ಪ್ರೊ. ನವೀನ್ ಚಂದ್ರ ಅವರಿಗೆ ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡಿಯನ್ ವಿಶ್ವವಿದ್ಯಾನಿಲಯವು ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ. ಎಂಐಟಿ ಮಣಿಪಾಲದ ಪ್ರಾಧ್ಯಾಪಕ ಡಾ. ಲೆವಿಲಿನ್ ಲೆಸ್ಟರ್ ರಾಜ್ ರೊಡ್ರಿಗಸ್ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ “Biological Simulation with Special Emphasis on Water Based Disease Propagation” ಎಂಬ ಸಂಶೋಧನಾ ಪ್ರಬಂಧಕ್ಕೆ ಈ ಪದವಿ ಲಭಿಸಿದೆ.

ಈ ಸಂಶೋಧನೆಯಲ್ಲಿ ನೀರಿನ ಮೂಲಕ ಹರಡುವ ರೋಗಗಳು ಜನರಲ್ಲಿ ಹೇಗೆ ವ್ಯಾಪಿಸುತ್ತವೆ ಎಂಬುದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲಾಗಿದೆ. ಬಯೋಲಾಜಿಕಲ್ ಸಿಮ್ಯುಲೇಷನ್ ಎಂಬ ವಿಧಾನವನ್ನು ಬಳಸಿ ರೋಗಗಳ ಹರಡುವಿಕೆಯ ಮಾದರಿಗಳನ್ನು ರೂಪಿಸಿ ಅವುಗಳ ಪರಿಣಾಮವನ್ನು ವಿಶ್ಲೇಷಿಸಲಾಗಿದೆ. ಈ ಅಧ್ಯಯನದಿಂದ ಕಾಲರಾ, ಟೈಫಾಯ್ಡ್ ಮತ್ತು ಡೈರಿಯಾ ಮುಂತಾದ ನೀರಿನ ಮೂಲಕ ಹರಡುವ ರೋಗಗಳನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮಗಳನ್ನು ರೂಪಿಸಲು ಸಹಾಯವಾಗುತ್ತದೆ.

ಡಾ. ನವೀನ್ ಚಂದ್ರ ಅವರು ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ “Clinical Biochemistry and Haematology” ಎಂಬ ಪಠ್ಯಪುಸ್ತಕವನ್ನು ರಚಿಸಿದ್ದಾರೆ. ವೈಜ್ಞಾನಿಕ ಪತ್ರಿಕೆಗಳಲ್ಲಿ ಸುಮಾರು 15 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದು, 12ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಹಲವಾರು ಸಂಶೋಧನಾ ಯೋಜನೆಗಳಲ್ಲಿ ಪ್ರಧಾನ ಸಂಶೋಧಕರಾಗಿ ಕಾರ್ಯನಿರ್ವಹಿಸಿದ್ದು, 30ಕ್ಕೂ ಹೆಚ್ಚು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಅವರಿಗೆ 25 ವರ್ಷಗಳ ಬೋಧನಾ ಅನುಭವ ಹಾಗೂ 15 ವರ್ಷಗಳ ಸಂಶೋಧನಾ ಅನುಭವವಿದೆ.

ಸಾಮಾಜಿಕ ಕ್ಷೇತ್ರದಲ್ಲಿಯೂ ಅವರು ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ಉಡುಪಿ ಜಿಲ್ಲೆಯ ಕ್ಷೌರಿಕ ವೃತ್ತಿ ನಿರತ ಸವಿತಾ ಸಮಾಜದ ಬಂಧುಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಉದ್ದೇಶದಿಂದ 2007ರಲ್ಲಿ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸೊಸೈಟಿಯನ್ನು ಸ್ಥಾಪಿಸಿದರು. ಈ ಸಂಸ್ಥೆ 2020ರಲ್ಲಿ ಚಿಕ್ಕಬಳ್ಳಾಪುರದಲ್ಲಿ ನಡೆದ 67ನೇ ರಾಷ್ಟ್ರೀಯ ಸಹಕಾರಿ ಸಮ್ಮೇಳನದಲ್ಲಿ ರಾಜ್ಯಮಟ್ಟದ ಅತ್ಯುತ್ತಮ ಸಹಕಾರಿ ಪ್ರಶಸ್ತಿಯನ್ನು ಪಡೆದಿದೆ. ಸೊಸೈಟಿಗೆ ಉಡುಪಿ, ಕಾರ್ಕಳ, ಕುಂದಾಪುರ, ಕಾಪು ಮತ್ತು ಬ್ರಹ್ಮಾವರಗಳಲ್ಲಿ ಶಾಖೆಗಳಿದ್ದು, ಟಿಶ್ಯೂ ಪೇಪರ್ ಕೈಗಾರಿಕಾ ಘಟಕ ಹಾಗೂ ಡಯಾಗ್ನೋಸ್ಟಿಕ್ ಸೆಂಟರ್‌ಗಳನ್ನು ನಡೆಸುತ್ತಿದೆ.

ಡಾ. ರೇಖಾ ಎನ್. ಚಂದ್ರ ಅವರು 1972ರ ಮೇ 8ರಂದು ಮಂಗಳೂರಿನಲ್ಲಿ ಲೋಕಯ್ಯ ಭಂಡಾರಿ ಮತ್ತು ಶಕುಂತಲಾ ದಂಪತಿಯ ಮೂರನೇ ಪುತ್ರಿಯಾಗಿ ಜನಿಸಿದರು. ಮಂಗಳೂರಿನ ರೋಶ್ನಿ ನಿಲಯ ಕಾಲೇಜಿನಲ್ಲಿ ಮನಶಾಸ್ತ್ರ ವಿಷಯದಲ್ಲಿ ಬಿ.ಎ. ಪದವಿ ಪಡೆದ ಬಳಿಕ ಕಂಪ್ಯೂಟರ್ ಕ್ಷೇತ್ರದ ಮೇಲೆ ಆಸಕ್ತಿ ಬೆಳೆಸಿ ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ ಇನ್ ಕಂಪ್ಯೂಟರ್ ಅಪ್ಲಿಕೇಶನ್ (PGDCA) ಪದವಿ ಪಡೆದರು.

1996ರ ಮೇ 3ರಂದು ಅವರು ಡಾ. ನವೀನ್ ಚಂದ್ರ ಅವರೊಂದಿಗೆ ವಿವಾಹವಾದರು. ಅದೇ ವರ್ಷ ಉಡುಪಿ ಎಂ.ಜಿ.ಎಂ. ಕಾಲೇಜಿನಲ್ಲಿ ಕಂಪ್ಯೂಟರ್ ಪ್ರೋಗ್ರಾಮರ್ ಆಗಿ ವೃತ್ತಿಜೀವನ ಆರಂಭಿಸಿದರು. ನಂತರ ಮಣಿಪಾಲ ವಿಶ್ವವಿದ್ಯಾನಿಲಯದಿಂದ ಇನ್ಫರ್ಮೇಶನ್ ಟೆಕ್ನಾಲಜಿ ವಿಷಯದಲ್ಲಿ ಎಂ.ಎಸ್‌.ಸಿ. ಪದವಿ ಪಡೆದು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿದರು.

ತಮ್ಮ ಬೋಧನಾ ಕೌಶಲ್ಯದಿಂದ ಅವರು ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಫೆಬ್ರವರಿ 2025ರಲ್ಲಿ ಅವರು ಎಂ.ಜಿ.ಎಂ. ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆಯಾಗಿ ನೇಮಕಗೊಂಡರು. ಇದೇ ವರ್ಷ ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡಿಯನ್ ವಿಶ್ವವಿದ್ಯಾನಿಲಯದಿಂದ “Software Industries ನಲ್ಲಿ Knowledge Management ಕುರಿತ ಅಧ್ಯಯನ” ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದು ತಮ್ಮ ಶೈಕ್ಷಣಿಕ ಸಾಧನೆಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ತೆಗೆದುಕೊಂಡಿದ್ದಾರೆ.

ಇದಲ್ಲದೆ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾ ಮಂಡಳಿಯ ಸದಸ್ಯೆಯಾಗಿಯೂ ಸೇವೆ ಸಲ್ಲಿಸುತ್ತಿದ್ದು, ಎಂ.ಜಿ.ಎಂ. ಕಾಲೇಜಿನ NSS ಅಧಿಕಾರಿಯಾಗಿ ವಿದ್ಯಾರ್ಥಿಗಳಲ್ಲಿ ಸಮಾಜಸೇವೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಡಾ. ನವೀನ್ ಚಂದ್ರ ಮತ್ತು ಡಾ. ರೇಖಾ ಎನ್. ಚಂದ್ರ ದಂಪತಿಗೆ ಡಾ. ನಿಧೀಶ್ ಮತ್ತು ನಿಕ್ಷೇಪ ಎಂಬ ಇಬ್ಬರು ಪುತ್ರರಿದ್ದಾರೆ.

ಒಂದೇ ಕುಟುಂಬದಲ್ಲಿ ದಂಪತಿಗಳಿಬ್ಬರೂ ಪಿಎಚ್‌ಡಿ ಪದವಿ ಪಡೆದಿರುವುದು ಅತ್ಯಂತ ವಿರಳವಾದ ಸಾಧನೆ. ಭಂಡಾರಿ ಸಮಾಜದ ಮಟ್ಟದಲ್ಲಿ ಇಂತಹ ಸಾಧನೆ ಇನ್ನಷ್ಟು ವಿಶೇಷವಾಗಿದ್ದು, ಇದು ಸಮಾಜಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಡಾ. ನವೀನ್ ಚಂದ್ರ ಹಾಗೂ ಡಾ. ರೇಖಾ ಎನ್. ಚಂದ್ರ ದಂಪತಿಯ ಈ ಶೈಕ್ಷಣಿಕ ಸಾಧನೆ ಯುವ ಪೀಳಿಗೆಗೆ ಪ್ರೇರಣೆಯಾಗಲಿ ಎಂಬುದು ಎಲ್ಲರ ಆಶಯವಾಗಿದೆ. ಅವರ ಮುಂದಿನ ಜೀವನ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗಳು ಮೂಡಿಬರಲಿ ಎಂದು ಭಂಡಾರಿ ವಾರ್ತೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.

ಬರಹ : ಕುಶಲ್ ಭಂಡಾರಿ ಬೆಂಗಳೂರು 

error: Content is protected !!