IMG_2020

ಭಂಡಾರಿ ಸಮಾಜ ಸಂಘ (ರಿ)ಬೆಂಗಳೂರು ಇದರ ವಾರ್ಷಿಕ ಮಹಾಸಭೆ ಮತ್ತು ಸ್ನೇಹಕೂಟದ ಸಭಾ ಕಾರ್ಯಕ್ರಮವು ಸಂಘದ ಅಧ್ಯಕ್ಷರಾದ ಪ್ರಸಾದ್ ಭಂಡಾರಿ ಮುನಿಯಾಲುರವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 21 ರ ಭಾನುವಾರ ಬೆಂಗಳೂರಿನ ರಾಜಾಜಿನಗರದಲ್ಲಿರುವ ಹೋಟೆಲ್ ಕದಂಬದಲ್ಲಿ  ಜರಗಿತು. ಮುಖ್ಯ ಅತಿಥಿಗಳಾಗಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರು ಮತ್ತು ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಲಕ್ಷ್ಮಣ್ ಕರಾವಳಿ, ಭಂಡಾರಿ ಸಮಾಜ ಸಂಘ ತೀರ್ಥಹಳ್ಳಿ ಘಟಕದ ಅಧ್ಯಕ್ಷರಾದ ಗಿರೀಶ್ ಭಂಡಾರಿ ಗುಡ್ಡೆಕೊಪ್ಪ, ಹೊಸನಗರ ಘಟಕದ ಅಧ್ಯಕ್ಷರಾದ ವಿಶ್ವನಾಥ್ ಭಂಡಾರಿ ಸೊನಲೆ, ಉದ್ಯಮಿಗಳಾದ ದಿವಾಕರ ಬಿ.ಕೆ, ಅರುಣ್ ಬಿ ಭಂಡಾರಿ ವೇಣೂರು ಉಪಸ್ಥಿತರಿದ್ದರು.

ಪ್ರಾಸ್ತಾವಿಕ ಭಾಷಣ ಮಾಡಿದ ಸಂಘದ ಹಿರಿಯರಾದ ಹಿರಿಯಣ್ಣ ಭಂಡಾರಿ ಬಾಳೆಹೊನ್ನೂರು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಅಡಿಯಲ್ಲಿ ದಕ್ಷಿಣ ಕನ್ನಡದಿಂದ ಬೇರೆ ಬೇರೆ ಕಡೆಗಳಿಗೆ ಹಂಚಿ ಹೋಗಿದ್ದಾರೆ. ಅವರೆಲ್ಲರನ್ನೂ 5 ವಲಯಗಳಾಗಿ ವಿಂಗಡಿಸಿದ್ದಾರೆ. ಅದರಲ್ಲಿ ಮೈಸೂರು, ಬೆಂಗಳೂರು, ಚಿಕ್ಕಮಗಳೂರು,ಕೊಡಗು, ಹಾಸನ, ಶಿವಮೊಗ್ಗ ಸೇರಿಸಿಕೊಂಡು ಬೆಂಗಳೂರು ವಲಯ ಮಾಡಲಾಗಿದೆ ಎಂದರು. ಸಮಾಜದ ಕಾರ್ಯಕ್ರಮ ವರ್ಷಕ್ಕೆ ಒಂದು ಬಾರಿ ನಡೆಯುವುದು. ಈ ಕಾರ್ಯಕ್ರಮಕ್ಕೆ ಸಮಾಜದ ಯುವಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪೋಷಕರು ಪ್ರೋತ್ಸಾಹಿಸಬೇಕು ಎಂದರು. ಸಂಘವು ವಿದ್ಯೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಭಂಡಾರಿ ಸಮಾಜ ಮೀಸಲಾತಿಯಲ್ಲಿ 2A ಕೆಟಗರಿಯಲ್ಲಿ ಇದ್ದೇವೆ. ಈಗ 1A ಯಲ್ಲಿ ನಮ್ಮನ್ನು ಸೇರಿಸಬೇಕೆಂದು ಮನವಿ ಮಾಡಿದ್ದೇವೆ. ಹಾಗಾದಾಗ ಸರಕಾರದ ಸವಲತ್ತುಗಳಲ್ಲಿ, ಉದ್ಯೋಗದಲ್ಲಿ, ಶೈಕ್ಷಣಿಕವಾಗಿ ನಮಗೆ ಹೆಚ್ಚು ಪ್ರಯೋಜನವಾಗಬಹುದು ಎಂದರು.

 

ಬಳಿಕ ಮಾತನಾಡಿದ ಮುಖ್ಯ ಅತಿಥಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಲಕ್ಷ್ಮಣ ಕರಾವಳಿಯವರು ಮಾತನಾಡುತ್ತಾ ಈಗ ನಾವು ಡಾಕ್ಟರ್ , ಇಂಜಿನೀಯರಿಂಗ್ ಅಥವಾ ಬೇರೆ ಬೇರೆ ಕ್ಷೇತ್ರದಲ್ಲಿ ಇರಬಹುದು ಆದರೆ ನಮ್ಮ ಕುಲಕಸುಬು ಯಾವುದು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಸರಕಾರ ನಮ್ಮ ಕುಲವೃತ್ತಿಯನ್ನು ಆದರಿಸಿ ನಮ್ಮನ್ನು ವಿಂಗಡಿಸಿದ್ದಾರೆ. ಅದರ ಪ್ರಯೋಜನವನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕು ಎಂದರು. ಯುವಕರು ಸಮಾಜದ ಕಾರ್ಯಕ್ರಮಗಳಿಗೆ ಹೆಚ್ಚೆಚ್ಚು ಬರಬೇಕು ಎಂದರು.

ನಂತರ ಮಾತನಾಡಿದ ಇನ್ನೋರ್ವ ಅತಿಥಿ ಗಿರೀಶ್ ಭಂಡಾರಿಯವರು ತನ್ನ ಅನುಭವವನ್ನು ಹೇಳುತ್ತಾ ನಮಗೆ ಭಂಡಾರಿ ಅಂತ ಹೇಳಿಕೊಳ್ಳಲು ತುಂಬಾ ಹೆಮ್ಮೆ ಇದೆ, ಭಂಡಾರಿ ಸಮಾಜದ ಹೆಸರಿನಲ್ಲಿ ಸರಕಾರದಿಂದ ಅನುದಾನ ಕೇಳಿದರೆ ಸಿಗುವುದಿಲ್ಲ, ಆದರೆ ಹೆಸರು ಬದಲಾಯಿಸಿ ಸವಿತಾ ಸಮಾಜದ ಹೆಸರು ಹಾಕಿ ನೋಂದಾವಣೆ ಮಾಡಿ ಕೇಳಿದರೆ ಒಂದು ಕೋಟಿಯವರೆಗೆ ಅನುದಾನ ಪಡೆಯಬಹುದು.ಸವಿತಾ ಸಮಾಜದ ಮೂಲಕ ಹಲವಾರು ಸವಲತ್ತುಗಳು ದೊರಕುತ್ತಿವೆ ಅದರ ಪ್ರಯೋಜನ ಪಡೆಯಬೇಕು ಎಂದರು. ಭಂಡಾರಿ ಮಹಾಮಂಡಲ ಮಲೆನಾಡಿನ ಪ್ರದೇಶಕ್ಕೆ ಭೇಟಿ ನೀಡಲು ಮನವಿ ಮಾಡಿದರು.

 

 

ಮತ್ತೋರ್ವ ಅತಿಥಿ ವಿಶ್ವನಾಥ್ ಭಂಡಾರಿ ಸೊನಲೆ ಇವರು ಭಂಡಾರಿ ಸಂಘ ಬೆಂಗಳೂರು ವಲಯದಿಂದ ಅತೀ ಹೆಚ್ಚು ವಿದ್ಯಾರ್ಥಿ ವೇತನ ಪಡೆದ ಘಟಕ ಹೊಸನಗರ, ಸಂಘಕ್ಕೆ ಘಟಕವು ಆಭಾರಿಯಾಗಿದೆ ಎಂದರು ಮತ್ತು ಕಾರ್ಯಕ್ರಮಕ್ಕೆ ಶುಭಾಶಯ ಕೋರಿದರು.

ಉದ್ಯಮಿ ದಿವಾಕರ ಬಿ ಕೆ ಯವರು ಸಂಘದ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಬಳಿಕ ಮಾತನಾಡಿದ ಅರುಣ್ ಭಂಡಾರಿ ವೇಣೂರು ಭಂಡಾರಿ ಸಂಘದ ಮೂಲಕ ತನಗಾದ ಸಿಹಿ ಕಹಿ ಅನುಭವವನ್ನು ಹೇಳುತ್ತಾ ಆರೋಗ್ಯದ ಸಮಸ್ಯೆಯ ಬಗ್ಗೆ ಆರ್ಥಿಕ ಸಹಕಾರ ಕೇಳಿ ಬಂದವರಿಗೆ ಸಹಾಯ ಮಾಡಿರುವುದರ ಬಗ್ಗೆ ಒಂದೆರಡು ಉದಾಹರಣೆ ಸಹಿತ ಮಾಹಿತಿ ನೀಡಿದರು.

ನಂತರ ಮಾತನಾಡಿದ ನಿರ್ಗಮಿತ ಅಧ್ಯಕ್ಷರಾದ ಪ್ರಸಾದ್ ಭಂಡಾರಿ ಮುನಿಯಾಲುರವರು ಕಳೆದ ನಾಲ್ಕು ವರ್ಷಗಳ ಕಾಲ ಅಧ್ಯಕ್ಷರಾಗಿ ಸಂಘದ ಮೂಲಕ ಮಾಡಿರುವ ಸಾಧನೆಯನ್ನು ಉಲ್ಲೇಖಿಸಿದರು. ಮುಖ್ಯವಾಗಿ ವಿದ್ಯಾನಿಧಿಯ ಮೊತ್ತವನ್ನು 13 ಲಕ್ಷದಿಂದ 25 ಲಕ್ಷಕ್ಕೆ ಏರಿಸಿರುವ ಬಗ್ಗೆ ಮಾತನಾಡಿ ಈ ನಿಟ್ಟಿನಲ್ಲಿ ವಿದ್ಯಾನಿಧಿಗೆ ದೇಣಿಗೆ ನೀಡಿರುವ ಪ್ರತಿಯೊಬ್ಬ ಬಂಧುವಿಗೆ ಕೃತಜ್ಞತೆಯನ್ನು ಅರ್ಪಿಸಿದರು. ಈ ಕಾರಣದಿಂದ  ಈ ಬಾರಿ ದಾಖಲೆಯ ಸುಮಾರು 2.12 ಲಕ್ಷ ವಿದ್ಯಾರ್ಥಿ ವೇತನ ವಿತರಿಸುತ್ತಿದ್ದೇವೆ ಎಂದರು. ಮಂಕು ತಿಮ್ಮನ ಕಗ್ಗದ ಉದಾಹರಣೆಯನ್ನು ಹೇಳಿ ಸಮಾಜದ ಬಂಧುಗಳಲ್ಲಿ ಹಳೆಯ ಭಕ್ತಿ ಶ್ರದ್ಧೆ ಅಳಿಸಿ ಹೋಗುತ್ತಿದೆಯೇನೋ ಅಂತ ಭಾವನೆ ಬರುತ್ತಿದೆ ಎಂದರು. ಪೋಷಕರು ಸಮಾಜದ ಕಾರ್ಯಕ್ರಮಗಳಿಗೆ ಬರುವಾಗ ತಮ್ಮ ಮಕ್ಕಳನ್ನು ಕರೆದುಕೊಂಡು ಬರಬೇಕು ಎಂದರು.ನನ್ನ ಅವಧಿಯಲ್ಲಿ ನನ್ನ ಜೊತೆಗೆ ಇದ್ದು ಸಹಕಾರ ನೀಡಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸಿದರು.

ನೂತನ ಅಧ್ಯಕ್ಷರಾದ ಮೋಹನ್ ಭಂಡಾರಿ ಬಾಳೆಹೊನ್ನೂರು ರವರು ನನ್ನ ಅಧ್ಯಕ್ಷೀಯ ಅವಧಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಬೇಕೆಂಬ ಹಂಬಲವಿದ್ದು ಎಲ್ಲರ ಸಹಕಾರವನ್ನು ನಿರೀಕ್ಷಿಸುತ್ತೇನೆ ಎಂದರು.

 

 

 

ಪ್ರಶಸ್ತಿ ವಿಜೇತ ಪತ್ರಕರ್ತರಾದ ರವಿ ಬಿದನೂರು, ಸರ್ವೋತ್ತಮ ಸೇವಾ ಪ್ರಶಸ್ತಿ ವಿಜೇತೆ ಶೈಲಜಾ,ವೈಟ್ ಹೌಸ್ ಮಾಲಕ ಎಂ ಬಿ ಶಿವಕುಮಾರ್ ,ಎಸ್ ಎಸ್ ಎಲ್ ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಶಿರಾಳಕೊಪ್ಪದ ಈಶಾನ್, ಗಾಯಕ ಸಂದೀಪ್ ಬೆಳ್ತಂಗಡಿಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಭಂಡಾರಿ ಸಮಾಜ ಸಂಘ ಕಳಸ ಘಟಕದ ಅಧ್ಯಕ್ಷರಾದ ಮೋಹನ್ ಭಂಡಾರಿ ಯವರು ಸಂಘವು ನಿರ್ಮಿಸುತ್ತಿರುವ ಸುಮುದಾಯ ಭವನಕ್ಕೆ ಸಮಾಜ ಬಾಂಧವರಿಂದ ಆರ್ಥಿಕ ಸಹಾಯವನ್ನು ಕೇಳಿದರು.

 

ಅವರ ಮನವಿಗೆ ತಕ್ಷಣವೇ ಸ್ಪಂದಿಸಿದ ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯ   ರೂ 25,000/- , ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ನ ಶ್ರೀ ಲಕ್ಶ್ಮಣ ಕರಾವಳಿಯವರು ರೂ 10,000/-  ಹಾಗೂ ಪ್ರಸಾದ್ ಭಂಡಾರಿ ಮುನಿಯಾಲುರವರು ರೂ 10,000/- ಸಮುದಾಯ ಭವನಕ್ಕೆ ದೇಣಿಗೆ ನೀಡಿದರು.

ಸಂದೀಪ್ ಭಂಡಾರಿ ಬೆಳ್ತಂಗಡಿಯವರು ತಮ್ಮ ಅದ್ಭುತ ಕಂಠದಿಂದ ಹಾಡುವ ಮೂಲಕ ಜನರನ್ನು ರಂಜಿಸಿದರು. ರಾಜಶೇಖರ್ ರವರು ಹಾಡು ಹಾಗೂ ಸಮಾಜದ ಅನೇಕ ಮಕ್ಕಳ ನೃತ್ಯ, ಸಂಗೀತವು ಪ್ರೇಕ್ಷಕರ ಕಣ್ಮನ ಸೆಳೆಯಿತು.ಆದರ್ಶ ದಂಪತಿಯಾಗಿ ಹಿರಿಯರಾದ ಶ್ರೀಮತಿ ಗೀತಾ ಭಾಸ್ಕರ್ ದಂಪತಿಯು ಬಹುಮಾನ ಪಡೆದರು. ಬೆಸ್ಟ್ ಡ್ರೆಸ್, ಬೆಸ್ಟ್ ಹೇರ್ ಸ್ಟೈಲ್ , ಬೆಸ್ಟ್ ಡ್ರೆಸ್ಡ್ ಯೂತ್, ಬೆಸ್ಟ್ ಡ್ರೆಸ್ಡ್ ಕಪಲ್, ಬೆಸ್ಟ್ ಡ್ರೆಸ್ಡ್ ಬೇಬಿ ಮುಂತಾದ ಸ್ಪರ್ಧೆಯಲ್ಲಿ ಸಮಾಜದ ಅನೇಕ ಯುವಕ ಯುವತಿಯರು, ಮಕ್ಕಳು, ಹಿರಿಯರು ಬಹುಮಾನ ಪಡೆದರು.ಬಂಧುಗಳಿಗೆ ವಿವಿಧ ರೀತಿಯ ಮನರಂಜನಾ ಗೇಮ್ ಗಳನ್ನೂ ಆಯೋಜಿಸಲಾಗಿತ್ತು.
ಬೆಳಗ್ಗಿನ ಉಪಹಾರ ,ಮದ್ಯಾಹ್ನ ಸ್ವಾದಿಷ್ಟವಾದ ಭೋಜನ, ಸಂಜೆಯ ಉಪಹಾರವನ್ನು ಆಗಮಿಸಿರುವ ಎಲ್ಲರೂ ಸವಿದರು.

ಭಂಡಾರಿ ಸಮಾಜ ಸಂಘ ಮೂಡಿಗೆರೆ ಘಟಕ, ಕೊಪ್ಪ ಘಟಕ, ತೀರ್ಥಹಳ್ಳಿ ಘಟಕ, ಹೊಸನಗರ ಘಟಕದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಎಲ್ಲಾ ಘಟಕದ ಅಧ್ಯಕ್ಷರಿಗೆ ಆಯಾ ವಲಯಕ್ಕೆ ಮಂಜೂರಾಗಿರುವ ವಿದ್ಯಾರ್ಥಿ ವೇತನದ ಚೆಕ್ ವಿತರಿಸಲಾಯಿತು.

ಸ್ಪರ್ಧೆಗಳಲ್ಲಿ ವಿಜೇತರಾದ ಬಂಧುಗಳಿಗೆ ಬಹುಮಾನ , ಮನರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಂಧುಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು.
ವಂದನಾ ಉಮೇಶ್ ರವರು ಪ್ರಾರ್ಥಿಸಿದರು, ಸಂಘದ ಪ್ರಧಾನ ಕಾರ್ಯದರ್ಶಿ ಕುಶಲ್ ಭಂಡಾರಿ ಸ್ವಾಗತಿಸಿದರು, ಸಂಘದ ಉಪಾಧ್ಯಕ್ಷರಾದ ರಾಜಶೇಖರ್ ಭಂಡಾರಿ ಯವರು ವಂದನಾರ್ಪಣೆಗೈದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ರತೀಶ್ ಭಂಡಾರಿ ಕುಂಜಿಬೆಟ್ಟು ನಿರೂಪಿಸಿದರು. ಸಭಾ ಕಾರ್ಯಕ್ರಮವನ್ನುಸಂಘದ ಉಪಾಧ್ಯಕ್ಷರಾದ ಸುಧಾಕರ ಭಂಡಾರಿ ಶಿರಾಳಕೊಪ್ಪರವರು ಅತ್ಯುತ್ತಮವಾಗಿ ನಿರೂಪಣೆ ಮಾಡಿದರು.

-ಭಂಡಾರಿ ವಾರ್ತೆ

error: Content is protected !!